ಇಸ್ಕಂದರ್ ಬೇಗ್
ಸು. 14040-1468. ಆಲ್ಬೇನಿಯದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಖ್ಯಾತವೀರ. ಮೊದಲ ಹೆಸರು ಜಾರ್ಜ್ ಕ್ಯಾಸ್ಟ್ರಿಯೋಟ. ಸ್ಕಾಂಡರ್ ಬೇಗ್ ಅಥವಾ ಇಸ್ಕಂದರ್ ಬೇಗ್ ಎಂಬ ಹೆಸರುಗಳೂ ಇದ್ದವು. ಆಲ್ಬೇನಿಯದ ಮಧ್ಯ ಮತ್ತು ಉತ್ತರ ಭಾಗಗಳಲ್ಲಿ ವಿಶಾಲ ಪ್ರಾಂತ್ಯದ ಒಡೆತನವನ್ನು ಹೊಂದಿದ್ದ ಅರಸುಮನೆತನಕ್ಕೆ ಸೇರಿದ ಮಾಂಡಲಿಕ ಜಾನ್ ಕ್ಯಾಸ್ಟ್ರಿಯೋಟನ ನಾಲ್ವರು ಮಕ್ಕಳಲ್ಲಿ ಒಬ್ಬ. ಆಟೊಮನ್ ತುರ್ಕರು ಕ್ಯಾಸ್ಟ್ರಿಯೋಟನ ರಾಜ್ಯಕ್ಕೆ ನುಗ್ಗಿ ಕಾಳಗದಲ್ಲಿ ಗೆದ್ದ ಮೇಲೆ, ಆತ ರಾಜ್ಯದ ಅತ್ಯುತ್ತಮ ಕೋಟೆ ಎನಿಸಿದ ಕ್ರೂಯೀಯನ್ನು ಬಿಟ್ಟುಕೊಟ್ಟು ಸುಲ್ತಾನ ಎರಡನೆಯ ಮುರಾದನಿಗೆ ತನ್ನ ನಾಲ್ಕು ಮಕ್ಕಳನ್ನು ಒತ್ತೆಯಾಳುಗಳಾಗಿ ಒಪ್ಪಿಸಬೇಕಾಯಿತು. ಅಲ್ಲಿ ಜಾರ್ಜ್ ಕ್ಯಾಸ್ಟ್ರಿಯೋಟನನ್ನು ಮುಸ್ಲಿಮನಾಗಿ ಮತಾಂತರಗೊಳಿಸಿ ಇಸ್ಕಂದರ್ ಬೇಗ್ ಎಂದು ಕರೆಯಲಾಯಿತು. ಅನಂತರ ಬೇಗ್ ಏಡ್ರಿಯನೋಪಲಿನಲ್ಲಿ ಸೈನಿಕಶಿಕ್ಷಣ ಪಡೆದ. ಬಾಲ್ಯದಲ್ಲೇ ಇವನ ಪ್ರತಿಭೆಯನ್ನು ಗುರುತಿಸಿ ಸುಲ್ತಾನ ಇವನನ್ನು ತನ್ನ ಖಾಸಾ ಅಧಿಕಾರಿ ವರ್ಗಕ್ಕೆ ಸೇರಿಸಿಕೊಂಡು ಬೇ ಎಂಬ ಗೌರವಸ್ಥಾನ ನೀಡಿದ.

	1443ರಲ್ಲಿ ಜಾನ್ ಹ್ಯೂನ್ಯಾಡಿ ಎಂಬುವನ ಕೈಕೆಳಗೆ ಆಲ್ಬೇನಿಯನ್ನರು ಸ್ವಾತಂತ್ರ್ಯಕ್ಕಾಗಿ ತುರ್ಕರ ವಿರುದ್ಧ ಹೋರಾಡುತ್ತಿದ್ದರೆಂಬುದನ್ನು ತಿಳಿದು ಇಸ್ಕಂದರ್ ತುರ್ಕಿ ಪಡೆಯನ್ನು ತ್ಯಜಿಸಿ ಆಲ್ಬೇನಿಯದ ಕಡೆಗೆ ಸೇರಿದ. ಕ್ರೂಯೀ ಕೋಟೆಯಿಂದ ತುರ್ಕಿ ಸೈನ್ಯವನ್ನೋಡಿಸಿ ಅಲ್ಲಿ ಆಲ್ಬೇನಿಯದ ರಾಷ್ಟ್ರೀಯ ಧ್ವಜವನ್ನೇರಿಸಿದ. ತುರ್ಕರ ವಿರುದ್ಧ ಧರ್ಮಯುದ್ಧವನ್ನೇ ಸಾರಿದ. ತನ್ನ ತಂದೆಗೆ ಸೇರಿದ್ದ ಪ್ರಾಂತಗಳನ್ನೆಲ್ಲ ವಶಪಡಿಸಿಕೊಂಡ. ಪರಕೀಯರ ಕೈಲಿದ್ದ ರಾಷ್ಟ್ರವನ್ನು ವಿಮೋಚನೆ ಮಾಡಲು ಎಲ್ಲರಿಗೂ ಕರೆಕೊಟ್ಟ. ಈ ಮಧ್ಯೆ ಇಸ್ಲಾಂ ಧರ್ಮವನ್ನು ತ್ಯಜಿಸಿ ಮತ್ತೆ ಕ್ರೈಸ್ತನಾಗಿದ್ದ. ಆಲ್ಬೇನಿಯದ ಮಾಂಟೆನೀಗ್ರೊ ದೇಶಗಳ ಜನರೆಲ್ಲ ಇವನ ಕರೆಗೆ ಓಗೊಟ್ಟರು. ವೆನಿಸ್ ಇವನ ಸಹಾಯವನ್ನು ಕೋರಿತು. 1457ರಲ್ಲಿ ಪೋಪ್ ಮೂರನೆಯ ಕ್ಯಾಲಿಕ್ಸತುರ್ಕರ ವಿರುದ್ಧ ನಡೆಸಬೇಕಾಗಿದ್ದ ಧರ್ಮಯುದ್ಧಕ್ಕೆ ಇವನನ್ನೇ ಪ್ರಧಾನ ಸೇನಾಪತಿಯನ್ನಾಗಿ ನೇಮಿಸಿದ. ಆಗ ಸುಲ್ತಾನನ ಭಾರಿ ಸೈನ್ಯವೊಂದು ಆಲ್ಬೇನಿಯಕ್ಕೆ ನುಗ್ಗಿತು. ಅತ್ಯಂತ ಧೈರ್ಯ ಸಾಮಥ್ರ್ಯಗಳಿಂದ ಆ ಸೈನ್ಯವನ್ನು ಇಸ್ಕಂದರ್ ಎದುರಿಸಿದ. ಕೊನೆಗೆ 1461ರಲ್ಲಿ ಸುಲ್ತಾನ ಹತ್ತು ವರ್ಷದ ಯುದ್ಧವಿರಾಮಕ್ಕೆ ಒಪ್ಪಿಕೊಳ್ಳಬೇಕಾಯಿತು. ಆದರೆ, ಪೋಪ್ (ಎರಡನೆಯ ಪಯಸ್) ಮುಸ್ಲಿಮರ ಮೇಲೆ ಇನ್ನೊಂದು ಧರ್ಮಯುದ್ಧದ ಏರ್ಪಾಡು ನಡೆಸುತ್ತಿರುವುದನ್ನು ತಿಳಿದು, 1463ರಲ್ಲೇ ಯುದ್ಧವಿರಾಮ ಒಪ್ಪಂದವನ್ನು ಮುರಿದು ಸುಲ್ತಾನ ಕದನಕ್ಕೆ ತೊಡಗಿದ. ಪೋಪ್ ಸ್ವಲ್ಪಕಾಲದ ಮೇಲೆ ಮರಣಹೊಂದಿದ. ಮುಂದೆ ಧರ್ಮಯುದ್ಧದಲ್ಲಿ ಆಸಕ್ತಿ ಕುಗ್ಗಿತು. ಆಗ ಇಸ್ಕಂದರ್ ಒಬ್ಬನೇ ತುರ್ಕಿಯ ದೊಡ್ಡ ಸೈನ್ಯವನ್ನದುರಿಸಬೇಕಾಯಿತು. ಸುಲ್ತಾನನ ಸೈನ್ಯ ಕ್ರೂಯೀ ಕೋಟೆಯನ್ನು ಮುತ್ತಿತು. ಅತ್ಯಂತ ಧೈರ್ಯ ಸಾಮಥ್ರ್ಯಗಳಿಂದ ಆಕ್ರಮಣಕಾರರನ್ನು ತಡೆಗಟ್ಟಿ ಕೋಟೆಯನ್ನು ರಕ್ಷಿಸಿದ. ಈತ ಕಾಲವಾಗುವವರೆಗೂ (1468) ಆಲ್ಬೇನಿಯ ತುರ್ಕರ ವಶವಾಗಲಿಲ್ಲ.											
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ